10% ಮೀಸಲಾತಿ ಕುರಿತು ಒಂದು ಟಿಪ್ಪಣಿ
2019ರಲ್ಲಿ ಕೇಂದ್ರ ಸರ್ಕಾರ ಮೀಸಲು ಸಮುದಾಯಗಳಿಗೆ ಸೇರಿಲ್ಲದವರಲ್ಲಿ ಬಡವರಿಗೆ 10%ರಷ್ಟು ಮೀಸಲಾತಿಯನ್ನು ಒದಗಿಸಲು ಸಂವಿಧಾನಕ್ಕೆ ತಿದ್ದುಪಡಿಯನ್ನು ತಂದಿತು. ಈ ನಡೆಯ ಹಿಂದಿರುವ ಪರಿಕಲ್ಪನೆಯೇ ಸಂವಿಧಾನ ವಿರೋಧಿ ಆಗಿದೆ.
ಇಂಥ ನಡೆಯನ್ನು ಕೇಂದ್ರ ಸರ್ಕಾರ ಇಟ್ಟಾಗ, ಎಲ್ಲಾ ಪಕ್ಷಗಳ ಮತ್ತು ಎಲ್ಲಾ ಸಮುದಾಯಗಳ ಸಂಸತ್ ಸದಸ್ಯರು ವಿರೋಧಿಸಬೇಕಿತ್ತು. ಇದಾಗಲಿಲ್ಲ. ಕಡೇ ಪಕ್ಷ ಪ.ಜಾತಿ/ಪ.ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಸಂಸತ್ ಸದಸ್ಯರಾದರೂ ವಿರೋಧಿಸಬೇಕಿತ್ತು. ಅದೂ ಆಗಲಿಲ್ಲ.
ಕೊನೆಯ ಹೆಜ್ಜೆಯಾಗಿ ಕೆಲವರು ಈ ನಡೆ ವಿರುದ್ಧ ಕೋರ್ಟುಗಳಿಗೆ ಹೋದರು. ಆದರೆ, ಕೋರ್ಟು ಈ ವಿಷಯಕ್ಕೆ ಆದ್ಯತೆಯನ್ನು ನೀಡಲೇ ಇಲ್ಲ.
ಮೀಸಲಾತಿ ಎಂಬುದನ್ನು ಕೇಂದ್ರ ಸರ್ಕಾರ ಗ್ರಹಿಸಿ, ಇಟ್ಟಿರುವ ಹೆಜ್ಜೆಯನ್ನು ನೋಡಿದರೆ, ಅದಕ್ಕೆ ಸಾಮಾಜಿಕ ನ್ಯಾಯ ತತ್ವದ ಆಶಯವೇ ತಿಳಿದಿಲ್ಲ ಎಂಬುದು ಖಾತ್ರಿಯಾಗುತ್ತದೆ.
ಅಲ್ಲದೆ, ಪ್ರಸ್ತುತ ದೇಶದಲ್ಲಿ ಪ.ಜಾತಿಗಳವರಿಗೆ ಮತ್ತು ಪ.ಪಂಗಡಗಳವರಿಗೆ ಅವರ ಜನಸಂಖ್ಯಾ ಪ್ರಮಾಣದಷ್ಟು ಮೀಸಲಾತಿ ಸರ್ಕಾರಿ ಹುದ್ದೆಗಳಲ್ಲಿ ದೊರಕುತ್ತಿದೆ. ಆದರೆ, ಇತರ ಹಿಂದುಳಿದ ವರ್ಗಗಳ ಜನಸಂಖ್ಯಾ ಪ್ರಮಾಣ 52%ರಷ್ಟಿದ್ದರೂ, ಅವುಗಳು ಪಡೆದುಕೊಳ್ಳಲು ಈಗ ಸಾಧ್ಯವಾಗುತ್ತಿರುವುದು ಕೇವಲ 27%ರಷ್ಟು ಮೀಸಲಾತಿಯನ್ನು. ಏಕೆಂದರೆ, ಒಟ್ಟು ಮೀಸಲಾತಿ ಪ್ರಮಾಣ 50%ರಷ್ಟನ್ನು ಮೀರಕೂಡದು ಎಂಬುದಾಗಿ ಸುಪ್ರೀಂ ಕೋರ್ಟಿನ ತೀರ್ಪು ಮಿತಿ ಹೇರಿದೆ.
ಕರ್ನಾಟಕದಲ್ಲಿ ಮೀಸಲಾತಿ ಇಲ್ಲದ ಸಮುದಾಯಗಳೆಂದರೆ ಬ್ರಾಹ್ಮಣ, ಆರ್ಯವೈಶ್ಯ, ಜೈನ, ನಾಯರ್, ಮೊದಲಿಯಾರ್ ಮಾತ್ರ. ಇವರ ಒಟ್ಟು ಜನಸಂಖ್ಯೆ ರಾಜ್ಯದಲ್ಲಿ 5%ನ್ನು ಮೀರುವುದಿಲ್ಲ. ಆದರೂ, ಈ ಸಮುದಾಯಗಳಿಗೆ 10%ರಷ್ಟು ಮೀಸಲಾತಿಗೆ ಅವಕಾಶ ಕಲ್ಪಿಸಲಾಗಿದೆ.
ಇದನ್ನು ಒಪ್ಪುವುದು ಸಾಧ್ಯವಿಲ್ಲ.
ಒಟ್ಟಾರೆ, 10%ರಷ್ಟು ಮೀಸಲಾತಿ ಪರಿಕಲ್ಪನೆಯನ್ನೇ ತಿರಸ್ಕರಿಸಬೇಕಿದೆ.
No comments:
Post a Comment